ಓರಿಯಾನಿ, ಆಲ್ಫ್ರೆಡೊ: 1852-1909. ಇಟಲಿಯ ಕಾದಂಬರಿಕಾರ, ದಾರ್ಶನಿಕ, ನಾಟಕಕಾರ, ಕವಿ. 20ನೆಯ ಶತಮಾನದಿಂದ ಆ ದೇಶದಲ್ಲಿ ಬೆಳೆದುಬಂದ ಫ್ಯಾಸಿಸ್ಟ್‌ ತತ್ತ್ವದ ಮೇಲೆ ಪ್ರಭಾವ ಬೀರಿದ ವ್ಯಕ್ತಿ. ಪ್ರಾರಂಭದಲ್ಲಿ ಬರೆದ ಕಾದಂಬರಿಗಳಲ್ಲಿ ಜೀವನವನ್ನು ಕುರಿತ ವಿಕೃತ, ವಿಷಮ ದೃಷ್ಟಿಯಿದೆ. ಆದರೆ ಅನಂತರ ಬಂದ ಲ ಡಿಸ್ಫಾಟ (ಸೋಲು) ಎಂಬ ಕಾದಂಬರಿಯಲ್ಲಿ ಬಾಳಿನ ನೋವು, ನಿಸ್ಸಹಾಯಕತೆ, ಸಂಕಟಗಳ ಚಿತ್ರವಿದೆ, ಗಹನವಾದ ಚಿಂತನೆಯಿದೆ. ಇದು ಚಿರಕಾಲ ನಿಲ್ಲಬಲ್ಲ ಕೃತಿ. ಜರ್ಮನಿಯ ಹೆಗಲನ ಪ್ರಭಾವಕ್ಕೊಳಗಾಗಿ ಈತ ಬರೆದ ಲ ಲಾಟ ಪೊಲಿಟಿಕ ಇನ್ ಇಟಾಲಿಯ (ಇಟಲಿಯ ರಾಜಕೀಯ ಹೋರಾಟ) ಎಂಬ ಗ್ರಂಥವನ್ನು ಜನ ಕೆಲಕಾಲ ಅತಿಯಾಗಿ ಶ್ಲಾಘಿಸಿ, ಈತನನ್ನು ಫ್ಯಾಸಿಸ್ಟ್‌ ತತ್ತ್ವದ ಅಗ್ರದೂತನೆಂದು ಕೊಂಡಾಡಿದರು.     (ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ